ಆ ಕಣ್ಣುಗಳು

 ಅಯ್ಯೋ ಟೈಮ್ ಆಗೋಯ್ತಾ, ನಂದ್ ದಿನ ಇದೆ ಆಗೋಯ್ತು ಅಂತ ಅರ್ಧಂಬರ್ಧ ‌ತಿಂಡಿ ತಿಂದು ಒಂದೇ ಉಸಿರಲ್ಲಿ ಬಸ್ಟ್ಯಾಂಡ್ ಕಡೆ ಓಡಿದೆ, ಇ ಬಸಗಳ್ ಕಥೆ ಕೇಳ್ಬೇಕ ಬೇಗ ಬಂದು ಎಷ್ಟೊತ್ತು ಕಾಯಿದರು ಬರಲ್ಲ,ಸೆಕೆಂಡ್  ಲೇಟ್ ಆದ್ರೂ ನೆಕ್ಸ್ಟ್ ಸ್ಟಾಪ್ನಲ್ಲಿರ್ತವೆ, ಅಂತು ಇಂತು ಕಷ್ಟಪಟ್ಟು ಬಸ್ಟ್ಯಾಂಡ್ ತಲುಪಿದೆ, ಯಥಾಪ್ರಕಾರ ಬಸ್ ನಮ್ಮ ಸ್ಟ್ಯಾಂಡ್ ಬಿಟ್ಟು ಆಗಷ್ಟೆ ಹೋಗ್ತಿತ್ತು, ಹ್ಮ್ ನಂಗೇನ್ ಹೊಸದಲ್ಲ ಬಿಡಿ ಓಡೋ ಬಸ್ ಹತ್ತೋದು ಕಾಲೇಜ್ ಡೇಸ್ ಇಂದಲೇ ಅಭ್ಯಾಸ ಆಗಿದೆ, ಬ್ಯಾಗ್ ನ ಟೈಟ್ ಮಾಡ್ಕಂಡು ಓಡಿ ಬಸ್ ಹತ್ತಿದೆ ಹೆಂಗೋ ಮುಂದೆನೇ ಸೀಟ್ ಖಾಲಿಯಿತ್ತು ಕೂತ್ಕಂಡು ಪರ್ಸ್ ಯಿಂದ ಪಾಸ್ ತಗ್ದು ಕಂಡಕ್ಟರ್ ಗೆ ತೋರುಸ್ದೆ,


        ಬೆಲ್ಟ್ ಲೂಸ್ ಮಾಡ್ಕಂಡು ತೂ ಫಸ್ಟ್ ಇ ಹೊಟ್ಟೆ ಕರುಗಿಸಬೇಕು ಅಂತ ಕಿಟಕಿ ತಗ್ದೆ, ಅಸ್ಟ್ರಲ್ಲಿ ನೆಕ್ಸ್ಟ್ ಸ್ಟಾಪ್ ಬಂತು ಬಸ್ ನಿಂತೊಡನೆ ಯಾರೋ ೩ ಜನ ಇಳಿದ್ರು ೨ ಹತ್ಕೊಂಡ್ರು ಬಸ್ ಹೊರಡ್ತು ಯಾರೋ ಒಬ್ಬ ಹುಡುಗಿ ನನ್ನಂತೆಯೆ ಓಡೋ‌ ಬಸ್ ಹತ್ತಿದಳು, ಉದ್ದ‌ ಕೂದಲು ಬಿಳಿ ಮೈ ಬಣ್ಣ ಕೆಂಪು ಚೂಡಿದಾರ ಹಣೆಗೆ ದೇವರ ಕುಂಕುಮ ಅಬ್ಬಾ ಇಂತ ಕಾಲದಲ್ಲೂ ಇಂತ ಹುಡುಗಿನ ಅಂತ ಯೋಚಿಸೋದರೊಳಗೆ ನನ್ನ‌ ಪೂರ್ತಿ ದೃಷ್ಟಿ ಅವಳ ಕಣ್ಣುಗಳ ಕಡೆ ಹೋಯಿತು, ಬಿಳಿಕೊಳದೊಳಗೆ ಕಪ್ಪು ಮೀನಿನಂತೆ ಕಣ್ಣುಗುಡ್ಡೆಗಳು, ಕಣ್ರೆಪ್ಪೆಗೆ ಪೂರ್ತಿ ‌ಮುಚ್ಚಲು ಕಷ್ಟವಾಗುವಂತಹ 

ದೊಡ್ಡ ಕಣ್ಣುಗಳು, ಉಫ್... ರೆಪ್ಪೆ ಗೆ ಸಹಾಯ ಮಾಡಲು ತನ್ನ ಬ್ಯಾಗ್ ನಿಂದ ಒಂದು ಕನ್ನಡಕ ತೆಗೆದು ಹಾಕಿಕೊಂಡಳು, ಸಡನ್ ಆಗಿ ನನ್ನ ಕಡೆ ತಿರುಗಿದಳು ನನ್ನದೋ ತುಂಬಾ ನಾಚಿಕೆಯ ಸ್ವಭಾವ ಆದರೂ ಅವತ್ತೇಕೊ ಅವಳ ಕಣ್ನೋಟವನ್ನೆ ನೋಡುತ್ತಿದೆ ಅವಳ ಮುಖದ ಭಾವವೇನೋ ಬದಲಾಗುತ್ತಿರಬಹುದು ಆದರೆ ನನ್ನ ದೃಷ್ಟಿ ಮಾತ್ರ ಆ ಕನ್ನಡಕ ಹಾಕಿದ್ದ ಕನ್ನಡಿಯಂತ ಕಣ್ಣುಗಳ ಮೇಲೆಯಿತ್ತು.


      ಹೌದು!, ಅದೇ ಕಣ್ಣುಗಳು ಅದೇ ಕನ್ನಡಕದೊಳಗಿನ ಕಣ್ಣುಗಳು ಕಾಲೇಜಿನ ಆ ದಿನಗಳು, ಆಗಷ್ಟೇ ಸ್ಕೂಲ್ ಬಿಟ್ಟು ಕಾಲೇಜ್ ಸೇರಿದ್ದೆ, ನಮ್ಮೂರಿಂದ ಕಾಲೇಜ್ ದೂರ ಬಸ್ ವ್ಯವಸ್ಥೆ ಸರಿಯಿಲ್ಲ ಅಂತ ತಿಪಟೂರಲ್ಲೇ ಹಾಸ್ಟೆಲಿಗೆ ಸೇರ್ಸಿದ್ರು, ಎಲ್ಲರಂತೆ ಕನಸಿನ ಜೊತೆ ಕೌತುಕತೆ ಕೂಡ, ಹೇಗೋ ಒಂದಾರು ತಿಂಗಳು ಮುಗಿದಿತ್ತು ಯಾಕೋ ಅವತ್ತು ಹಾಸ್ಟಲ್ನಿಂದ ಬೇಗನೆ ಕಾಲೇಜ್ಗೆ ಬಂದೆ, ಇನ್ನೂ ಒಂದು ಗಂಟೆಯಷ್ಟು ಟೈಮ್ ಯಿತ್ತು ಅನಿಸುತ್ತದೆ ಅಲ್ಲೊಬ್ಬ ಇಲೊಬ್ಬರಂತೆ ವಿರಳವಾಗಿ ಬೇಗ ಬಂದವರು ಕಾಣುತ್ತಿದ್ದರು, ನಮ್ಮ ಕಾಲೇಜಿನ ಬಯೋ ಪಾರ್ಕ್ ಒಳಗೆ ಹೋದೆ, ಅಬ್ಬಾ!! ಎಂತ ಹಸಿರು ಸುತ್ತಲು ಬೆಳಗಿನ ಬಿಸಿಲಿಗೆ ಮುತ್ತಿನಂತೆ ಹೊಳೆಯುತ್ತಿದ್ದ ಮಂಜನಿಗಳು ಇದರ ಮಧ್ಯೆ ಮಧ್ಯೆ ಇಬ್ಬನಿಗೆ ನೆನೆದ ಕಲ್ಲಿನ ಬೆಂಚುಗಳು.

      ಹೀಗೆ ಒಂದೆರಡು ಹೆಜ್ಜೆಯಿಟ್ಟೊಡನೆ ಪಾರ್ಕನ ಇನ್ನೊಂದು ಬದಿಯಿಂದ ಯಾರೋ ನಡೆದು ಬರುತ್ತಿದ್ದರು ನಾನೇನು ಕ್ಲಾಸಿಗೆ regular ಆಗಿ ಹೋಗ್ತಿದ್ದವ್ನೇನು ಅಲ್ಲ ಆದರೂ ಮುಂದೆ ಬರುತ್ತಿದವಳು ನಮ್ಮದೆ ಕ್ಲಾಸಿನವಳು ಎಂದಷ್ಟೇ ಗೊತ್ತಿತ್ತು ಹೆಸರು ವಿಳಾಸದ ಅರಿವಿರಲಿಲ್ಲ, ಎದುರಿಗೆ ಬರುತ್ತಿದ್ದವಳು ಆ ಹಸಿರು ಹಾಸಿನ ಮಧ್ಯೆ ದೇವತೆಯಂತೆ ಕಾಣುತ್ತಿದ್ದಳು, ಬಾಚಿ ಕೆರೆದ ಕೂದಲು ಉದ್ದ ಜಡೆ, ಸಣ್ಣ ವೈಯ್ಯಾರದ ನಡೆ ಹಣೆಯ ಬಟ್ಟು ಕಿವಿಯ ಓಲೆ ಎಲ್ಲವೂ ನನ್ನನ್ನು ಅವಳೆಡೆಗೆ ಸೆಳೆಯಿತು, ಇವೆಲ್ಲಕ್ಕಿಂತ ಹೆಚ್ಚಾಗಿ ಅವಳ ಆ ಕಣ್ಣುಗಳು......

      

      ಮೊದಲೆಹೇಳಿದ್ನಲಾ ನಂದು ನಾಚಿಕೆಯ ಸ್ವಭಾವ ಅಂತ, ಅಲ್ಲಿ ಬೇರೆ ಯಾರು ಇರಲಿಲ್ಲ ನನ್ನ ಹುಟ್ಟೋ ಪ್ಯಾಟೆಗ್ ಬಂದ ಬೋರೆಗೌಡನ್ ತರ ತಲೆ ಬಾಚ್ಗಂಡ್ ಹಣೆಗೆ ವಿಭೂತಿ ಇಟ್ಕಂಡ್ ಬಂದಿದ್ದೆ ಅವತ್ಯಾಕೋ ನಾಚಿಕೆಯೋ ಅಥವಾ ನನ್ನ ಅವಸ್ಥೆಯನ್ನು ಮರೆಮಾಡಲೋ ಅವಳ ದಾರಿಯಿಂದ ಸರಿದು ಪಕ್ಕದಲ್ಲೆ ಇದ್ದ ಬೆಂಚು ಕಲ್ಲಿನ ಮೇಲೆ ಕುಳಿತೆ, ಅವಳಿಗೂ ನನ್ನ ಮುಖ ಪರಿಚಯವಿದ್ದಂತಿತ್ತು ಓರೆ ನೋಟದಲ್ಲೆ ನನ್ನನ್ನು ನೋಡಿಕೊಂಡೆ ಹೋದಳು, ಕೇಳಿರ್ತಿರಲ್ವ "ಓರೆ ನೋಟದಲಿ ಇವರ ಫೋಕಸ್ಸು ಜಾಸ್ತಿ ಅದನಾ ನಾವ್ ಅಂದುಕ್ಕೊಳ್ಳೋದು ಶುರುವಾಯಿತು ಪ್ರೀತಿ" ಅಂತ ನಂಗ್ ಇದೆ ಆಗಿದ್ದು

ನನಗದೋ ಹೊಸ ಅನುಭವ, ಕೊಡೆ ಇದ್ದರು ಮಳೆಯಲ್ಲಿ ನೆನೆಯಬೇಕೆಂಬ ಹುಚ್ಚು ಹಂಬಲ, ಅದೇನೋ ಹೇಳ್ತಾರಲ್ಲ ಲವ್ ಅಟ್ ಫಸ್ಟ್ ಸೈಟ್ ಅಂತ ಅದೆ ಇರ್ಬೇಕಿದು, ನಾನಂತು ಅವಳ ಹಿಂಬಾಲಕನಾಗುವ ಎಲ್ಲಾ ಮುನ್ಸೂಚನೆ ನನಗೆ ದೊರಕಿತ್ತು......

    ಅದೇಕೋ ದಿನ ಕಪ್ಪು ಹಲಗೆಯ ಕಡೆ ಇರುತ್ತಿದ್ದ ನನ್ನ ಗಮನ ಅಂದು ಬೇರೆಯೊಬ್ಬಳ ಸಲುಗೆ ಬಯಸುತಿತ್ತು, ಅವಳೋ ಅಲುಗಾಡದ ಗೊಂಬೆಯಂತೆ ಬೋರ್ಡ್ ಕಡೆಗೆ ದೃಷ್ಟಿ ನೆಟ್ಟು ಕುಳಿತಿದ್ದಳು, ಕೋತಿಯಂತಹ ಮನಸ್ಸು ಹುಚ್ಚುಚ್ಚಾಗಿ ಅವಳ ಕಡೆ ಪದೆ ಪದೇ ತಿರುಗುತ್ತಿತ್ತು,  ದಿನವೂ ಬೇಗ ಬರುವುದು ಅವಳ ಬರುವಿಕೆಗೆ ಕಾಯುವುದು, ಮತ್ತದೆ ಮರ್ಕಟ ಮನಸ್ಸಿನ ಹುಚ್ಚಾಸೆ, ದಿನ ಕಳೆಯಿತು ವರ್ಷ ಮುಗಿಯಿತು.

    ಎರಡನೇ ವರ್ಷದಲ್ಲಿ ಸರ್ಕಾರದ ಆದೇಶ ಒಂದು ಬಂತು "ಇನ್ಮುಂದೆ ಶಾಲಾಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ,ಹಾಸ್ಟೆಲ್ ಬಿಟ್ಟು PG ಸೇರಿದ್ದೆ ಸೋಮಾರಿತನವು ನನ್ನನ್ನು ಸೇರಿತ್ತು, ಎಷ್ಟೇ ಬೇಗ ಹೊರಟರು ಪಕ್ಕದಲ್ಲೆ ಇದ್ದ ಕಾಲೇಜಿಗೆ ಬರುವುದು ತಡವಾಗೇ ಬಿಡುತ್ತಿತ್ತು, ಲೇಟ್ ಆದರೆ ಪನಿಶ್ಮೆಂಟ್ ಫೈನ್ ಇರ್ತಿದ್ವು, ಅಂದು ತುಂಬಾನೇ ಲೇಟ್ ಆಗಿತ್ತು ನನಗೆ ಗೊತ್ತಿದ್ದ ಕಳ್ಳಗಿಂಡಿಯನ್ನು ಬಳಸಿ ಹೇಗೋ ನನ್ನ ಕ್ಲಾಸಿನ ಬಾಗಿಲಿಗೆ ಬಂದೆ, ಎಲ್ಲರೂ ಹೀಚೆ ಗ್ರೌಂಡ್ನಲ್ಲಿ ಲೈನ್ ಮಾಡಿ ರಾಷ್ಟ್ರಗೀತೆಗೆ ತಯಾರಿ ಮಾಡುತ್ತಿದ್ದರು ufff ಬಚಾವ್ ಆದೆ ಅಂತ ಒಳಗೆ ಹೆಜ್ಜೆ ಇಟ್ಟೆ ಆ ಖಾಲಿ ಕ್ಲಾಸಿನ ಬೆಂಚುಗಳ ಮಧ್ಯೆ ಮನೆಯಿಂದ ತಂದ ತಿಂಡಿಯ ಬಾಕ್ಸ್ ಹಿಡಿದು ತಿನ್ನುತ್ತಿದ್ದ ನನ್ನವಳ ಕಂಡು ಬೆರಗಾದೆ ಅವಳು ನಾ ಬಂದ ವೇಗಕ್ಕೆ ಗಾಬರಿಯಿಂದ ಬಾಕ್ಸ್ ಕೆಳಗಿಟ್ಟಳು ಇಬ್ಬರಲ್ಲೂ ಹುಬ್ಬುಗಳ ನಡುವಿನ ಮಾತು ತುಟಿಯ ಅಂಚಿನ ತಡಯಲಾಗದ ಮುಗುಳ್ನಗು, ಆ ಅದ್ಬುತ ಅನುಭವಕ್ಕೆ ದಾರಿಮಾಡಿಕೊಟ್ಟ ಸರ್ಕಾರಕ್ಕೆ ಧನ್ಯವಾದ ತಿಳಿಸಿ ಕುಳಿತೆ, 

     ದಿನಗಳು ಕಳೆಯುತ್ತಿದ್ದರು ನನ್ನಲ್ಲಿನ ಭಾವನೆಗಳನ್ನು ಹೇಳಲು ಧೈರ್ಯವಿರಲಿಲ್ಲ, ಅವಳನ್ನು ಅಂತಹುದೇ ಭಾವನೆಗಳಿರಬಹುದೆಂಬ ಆಲೋಚನೆ, ಅವಳು ಕೂಡ ಆಗಾಗ ನನ್ನ ಕಡೆ ನೋಡುತ್ತಿದ್ದ ಪರಿ, ಕಾಣದಿದ್ದರೆ ಹುಡುಕಾಡುವ ತವಕ ಕಂಡೊಡನೆ ದೃಷ್ಟಿ ಬದಲಿಸುವ ರೀತಿ ಎಲ್ಲವೂ ನನಗೂ ತಿಳಿದಿತ್ತು ಯಾಕೆಂದರೆ ನಾವು ಆಗಾಗಲೇ 2 ನೇ ವರ್ಷವನ್ನು ಮುಗಿಯುವುದರಲ್ಲಿದ್ದೆವು, ಆ ದಿನವು ಬಂದಿತು ಮನಸ್ಸಿನ ಭಾವನೆಗಳನ್ನು ಹೇಳಲಾಗದೆ ಕಾಲೇಜು ಬಿಡುವ ದಿನ, ಕೊನೆಯ ಬಾರಿಗೆ ಅವಳ ಮುಖ ನೋಡಲು ಹುಡುಕಾಡಿದರು ಅವಳ ದರ್ಶನವಿಲ್ಲ, ಏಕೋ ಅಂದು ಉಸಿರಾಡಲು ಕಷ್ಟ ಎನಿಸಿತು, ಯಾರೋ ಬಿಗಿಯಾಗಿ ಕುತ್ತಿಗೆ ಹಿಡಿದ ಅನುಭವ.

     ಹೇಗೋ ಎಲ್ಲವನ್ನು ನುಂಗಿಕೊಂಡು ಅವಳ ನೆನಪನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ತುಮಕೂರಿಗೆ ಪದವಿ ವ್ಯಾಸಂಗಕ್ಕೆ ಬಂದೆ, ದಿನವೂ ಅವಳದೇ ನೆನಪು ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಅವಳಿಗಾಗಿ ಹುಡುಕಿದೆ ಅವಳು ಅಲ್ಲೆಲ್ಲೂ ಸಿಗಲಿಲ್ಲ, ನನ್ನ ಪ್ರೇಮ ಗಗನ ಕುಸುಮಾಯಿತೆ ಎಂದನ್ನಿಸುತ್ತಿರುವಾಗಲೇ ಅವಳನ್ನು ಕಂಡೆ ಗುಂಪಾಗಿ ನಿಂತಿದ್ದ ಜನಗಳ ಮಧ್ಯೆ  ಮನಸ್ಸಿನ ಮಣ್ಣಿನಲ್ಲೆ ಬೆಳೆಸಿದ ಪ್ರೀತಿಗಿಡದ ಹೂವನ್ನು ನಾ ಮುಡಿಸಬೇಕಿದ್ದ ಮುಡಿಗೆ ಆಗಲೇ ಬೇರೆ ಹೂ ಬಿದ್ದಾಗಿತ್ತು, ನಾ ಕಂಡೆ ಅವಳನ್ನು ಕಾಲುಂಗುರದೊಂದಿಗೆ ಹಣೆಯ ಕುಂಕುಮ ತಾಳಿಯೊಂದಿಗೆ,..ಕಣ್ಣಂಚಲಿ ಒಂದೊಂದೇ ಹನಿ ಜಾರುತ್ತಿತ್ತು, ಅವಳ ಆ ಕಣ್ಣುಗಳು ನನ್ನ ಬರಕವಿಕೆಗೆ ಕಾದಂತೆ ನನ್ನನ್ನೆ ನೋಡುತ್ತಿದ್ದವು ಹೃದಯದಲ್ಲಿ ಕಟ್ಪಿದ್ದ ಪ್ರೇಮ ಶಿಖರ ಪುಡಿಪುಡಿಯಾಗಿತ್ತು ನನಗೆ ಅಳುವುದು ಬಿಟ್ಟು ಬೇರೆ ದಾರಿಕಾಣದಾಗುತ್ತಿತ್ತು...

    ನನ್ನದೊಂದು ರೋಧನೆಯಾದರೆ ಅವಳದೋ ಹೇಳತೀರದ ವೇದನೆ ಕಾಲೇಜಿನ ಕೊನೆಯದಿನ ನಾ ಅವಳನ್ನು ಕಾಣಲಿಲ್ಲ ಎಂದಷ್ಟೇ ಹೇಳಿದ್ದೆ,, ಅಂದು ಅವಳ ಅಮ್ಮ ಕರೆ ಮಾಡಿ ಬೇಗ ಬರುವಂತೆ ತಿಳಿಸಿದ್ದರು, ಸಿಕ್ಕ  ವಾಹನವಿಡಿದು ತಾಯಿಯ ಮಾತಿನಲ್ಲಿದ್ದ ನೋವನ್ನು ಕಂಡು ಒಂದೇ ಉಸಿರಲ್ಲಿ ಮನೆ ಸೇರಿದ್ದಳು, ಕಿಡಿಯ‌ ನಿರೀಕ್ಷೆ ಯಲ್ಲಿದ್ದ ಇವಳಿಗೆ ಕಾಡ್ಗಿಚ್ಚೆ ಕಾದಿತ್ತು, ಮದುವೆ ಮೂರುದಿನವಿರುವಾಗಲೇ ಇವಳಕ್ಕ ಕೊನೆ ಕ್ಷಣದಲ್ಲಿ ಮದುವೆಗೆ ನಿರಾಕರಿಸಿ ಬಲವಂತ ಮಾಡಿದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಳು, ತಮ್ಮನಿಗೆ ಮಗಳು ಕೊಡುವ ಮಾತು ಉಳಿಸಿಕೊಳ್ಳಲು ಅವಳ ತಾಯಿ ನನ್ನವಳನ್ನು ಮದುವೆಗೆ ಬಲವಂತವಾಗಿ ಒಪ್ಪಿಸಿದ್ದಳು, ಅಕ್ಕವ ಬೆದರಿಕೆ ತಾಯಿಯ ಬಲವಂತ ತಂದೆಯ ಅಸಹಾಯಕತೆಯ ಎದುರು ಇವಳ ಕನಸ್ಸು,ನೋವು,ಮಾತು ಎಲ್ಲವೂ ಲೆಕ್ಕಕ್ಕಿಲ್ಲದಂತಾಗಿತ್ತು..

    ಮದುವೆಯಾದವನೋ ಇವಳನ್ನು ಒಂದು ವಸ್ತುವಾಗಷ್ಟೆ ನೋಡುತ್ತಿದ್ದನ್ನು ಇವಳ ಮುಂದಿನ ಓದಿಗೂ ಅಡ್ಡಗಾಲಕಿ ದಿನವೂ ಕುಡಿಯುತ್ತಾ ಹೊಡೆಯುತ್ತಿದ್ದನು, ಹೊತ್ತ ಕನಸ್ಸನ್ನೆಲ್ಲಾ ಮದ್ಯದಲ್ಲೇ ತೊಳೆದಿದ್ದನು, ತಾಯಿಯೋ "ಮದುವೆ ಮಾಡಿ ಆಗಿದೆ ನಿನ್ನ ಜೀವನ ನೀನೆ ಏನಾದರೂ ಮಾಡ್ಕೋ" ಅಂತ ಖಡಾಖಂಡಿತವಾಗಿ ಹೇಳಿ ಕಳುಹಿಸಿದ್ದರು, ಮೊದಲೇ ಮೃದು ಮನಸ್ಸಿನವಳಿವಳು ದಿನವೂ ಕಣ್ಣೀರಾಕಿ ಸೊರಗಿದ್ದಳು ಅವಳಿಗೂ ಜೀವನ ಸಾಕಾಗಿತ್ತು ಸಾವಲ್ಲಷ್ಟೆ ಸುಖ ಎಂದು ನಂಬಿ ರೈಲ್ವೆ ಕಂಬಿಗೆ ಕೊರಳು ಕೊಟ್ಟಿದ್ದಳು, 

    ಹೌದು!!, ನಾ ಕಂಡದ್ದು ಅವಳನ್ನು ಹೆಣವಾಗಿ, ಸುತ್ತಲು ನಿಂತ ಜನರ ಮಾತು ಕೇಳಿ ಹೃದಯ ಬಡಿತವೇ ನಿಲ್ಲುತಿತ್ತು, ಅವಳಿಗಾಗಿ ಕಾಯುತ್ತಿದ್ದ ಅವಳನ್ನೊಮ್ಮೆ ನೋಡಲು ಚಡಪಡಿಸುತ್ತಿದ್ದ  ನನ್ನ ಹೃದಯವನ್ನು ಬಿಟ್ಟೋದ ಅವಳ ಜೀವವನ್ನು ನೆನೆದು ಕಣ್ಣೀರಿಟ್ಟೆ, ನನ್ನ ಪ್ರೀತಿಯನ್ನು ಅವಳ ಬಳಿ ಹೇಳಿದಿದ್ದರೆ ಅವಳು ಬದುಕುತ್ತಿದ್ದಳೇನೋ, ಅವಳ ದೇಹವನ್ನೇ ನೋಡುತ್ತಾ ನಿಂತೆ, ಅವಳ ಮಿಡಿಯದ ಹೃದಯದಲ್ಲಿ ನನಗಿನ್ನೂ ಜಾಗ ಹುಡುಕುವ ಹುಚ್ಚಾಗಿತ್ತು, 

    "ಸರ್", 'ನಿಮ್ಮ ಸ್ಟಾಪ್ ಬಂತು', ಎಂದ ಕಂಡಕ್ಟರ್ ಮಾತು ಕೇಳಿ ವಾಸ್ತವಕ್ಕೆ ಬಂದೆ ಮುಂದೆ ನಿಂತಿದ್ದ ಹುಡುಗಿಯು ಕಾಣಲಿಲ್ಲ, ಬಸ್ ಇಳಿಯುತ್ತಾ ಯೋಚಿಸುತ್ತಿದ್ದೆ ಮರೆತಿದ್ದ ಹಳೆ ನೆನಪನ್ನು ಮತ್ತೆ ನೆನಪಿಸಿದಳಿಗೆ ಕೃತಜ್ಞತೆ ಹೇಳಲೇ? ಅಥವಾ ಮತ್ತೋಮ್ಮೆ ನೀರರಿಸಲು ಕಾರಣಳಾದಳೆಂದು ಬೈಯಲೆ?... 

                                           -ಮಿಥುನ್ ಪ್ರೀತಮ್

            

   

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮತ್ತೊಮ್ಮೆ ಪ್ರೀತಿಸೋಣ