ಭಾವನ
ಕೆನ್ನೆ ಮೇಲೆ ಜಾರುತ್ತಿದ್ದ ಕಣ್ಣನಿಗಳನ್ನ ಕೈ ಬೆರಳು ಒರೆಸುತ್ತಾ ಇದ್ದರೆ, ಮನಸ್ಸಲ್ಲಿ ಸಾವಿರಾರು ಯೋಚನೆಗಳು ಬಿಡುವಿರದೇ ಬರುತ್ತಿದ್ದವು, ಇಲ್ಲಿ ತಪ್ಪು ಯಾರದೂ ಅಂತನೇ ಗೊತ್ತಾಗ್ತಿಲ್ಲ, ಗೊತ್ತಾದ್ರೂ ಏನು ಮಾಡೋ ಪರಿಸ್ಥಿತಿಲಿ ಕೂಡ ನಾನಿಲ್ಲ, ಇಲ್ಲಿ ಕಳ್ಕೊಂಡಿದ್ನ ಪಡ್ಕೊಂಡ್ನೋ ಇಲ್ಲ ಪಡೆದುಕೊಂಡಿದ್ನ ಕಳೆದುಕೊಂಡೆನೋ ಅನ್ನೋ confusion ಎಂಬ ಕಡಲಲ್ಲಿ ಉತ್ತರದ ದಡ ಹುಡುಕುತ್ತಿದಿನಿ
ನನ್ನೆಸರು ಭಾವನಾ, ಬರೀ ಹೆಸರಲ್ಲಷ್ಟೆ ಭಾವನ ನನಗೆ ಬುದ್ದಿ ಬಂದಾಗಿನಿಂದಲೂ ನನ್ನೆಲ್ಲಾ ಭಾವನೆ ಆಸೆ ಗಳಿಗೆ ಬೇಲಿ ಹಾಕಿನೇ ಅಮ್ಮ ಬೆಳೆಸಿದಳು, ಗಂಡಸು ದಿಕ್ಕಿಲ್ಲದ ಮನೆ ಆಗಿದ್ದಿದ್ದರಿಂದ ನಮ್ಮಮ್ಮ ನನ್ನ ಜಾಸ್ತಿ ನೆ ಹದ್ದುಬಸ್ತಿನಲ್ಲಿ ಸಾಕಿದ್ದಳು, ನಮ್ಮನೆಲಿ ನಾನು ಅಮ್ಮ ಇಬ್ಬರೆ, ಅಪ್ಪ ಸುಮ್ಮನೆ ಅಪ್ಲಿಕೇಶನ್ ಫಾರಂಲಿ ಬರ್ತಿದ್ ಹೆಸರು ಅಷ್ಟೇ, ಎಲ್ಲಾ ಹುಡ್ಗೀರ್ ಕಥೆಲಿ ಬರ್ತಿದ್ದ ಹೀರೋ ಆಗಿರ್ತಿದ್ದ ಅಪ್ಪ ನನ್ ಕಥೆಲಿ ನಾನೇ ನೋಡ್ದೆ ಇರೋ ಒಂದು ಹೆಸರಷ್ಟೆ, ಬೇರೆ ಹುಡ್ಗೀರು my dad is my hero ಅಂತ ಹೇಳ್ಕೋ ಬೇಕಾದ್ರೆ ನನ್ ಮನಸ್ಸಲ್ಲಿ ಆಗ್ತಿದ್ ನೋವ್ ನ ಪದಗಳಲ್ಲಿ ವರ್ಣಿಸೋದು ಅಸಾಧ್ಯ, ಯಾವ್ದೋ ವಿಷ್ಯಕ್ಕೆ ಜಗಳ ಆಡ್ಕೊಂಡು ಅಪ್ಪ ತನ್ನ ಮೊದಲನೇ ಮಗು ಜೊತೆ ಮನೆ ಬಿಟ್ಟೋಗಿದ್ನಂತೆ ಇಷ್ಟೇ ನಂಗ್ ಗೊತ್ತಿದ್ ಸತ್ಯ..
ಡಿಗ್ರಿಲಿ ಉತ್ತಮ ಅಂಕಗಳೊಂದಿಗೆ ಪದವಿ ಮುಗಿಸಿದ್ದರು ಮುಂದೆ ಓದ್ಬೇಕು ಅನ್ನೋ ಆಸೆ ನನ್ನಲ್ಲಿರಲಿಲ್ಲ, ಅಮ್ಮನ್ ಕೈಲಿನೇ ದುಡುಸ್ಕಂಡ್ ಬದ್ಕೋಕೆ ಆಗ್ದೆ ಸಂಸಾರದ ಜವಾಬ್ದಾರಿ ಹೊತ್ತಿದ್ದೆ, ಒಳ್ಳೆಯ ಕಡೆ ಕೆಲ್ಸಕ್ ಸೇರಿದ್ದೆ, ಸಣ್ಣದರಿಂದನೂ ಗಂಡಸರನ್ನ ದ್ವೇಷ ಮಾಡ್ತಿದ್ದ ನಂಗೆ ಅವರೆಲ್ಲಾ ಕಾಮಿಗಳೇ ಅನ್ನೋ ಬಲವಾದ ಹೇಳಿಕೆ ತಲೆಯಲ್ಲೇ ಇತ್ತು, ಈಗಿರುವಾಗಲೇ ನನ್ನದೇ ಆಫೀನ ಸಹೋದ್ಯೋಗಿಯ ಪರಿಚಯ ಅನಿವಾರ್ಯ ಕಾರಣಗಳಿಂದ ಆಯ್ತು, ಅದೇನೋ ಗೊತ್ತಿಲ್ಲ ಗಂಡಸರ ನೆರಳಿಂದನೂ ದೂರ ಇದ್ದ ನನಗೆ ಅವನ ಗೆಳೆತನ ಒಂದು ಸೆಳೆತ ಅನ್ನಿಸುತಿತ್ತು,, ಹಾಗಂತ ಪ್ರೀತಿ ಪ್ರೇಮ ಅಂತೇನಿಲ್ಲ, ಇಷ್ಟು ವರ್ಷ ಭಾವನೆಗಳೆ ಇಲ್ಲದ ಬಂಜರು ಭೂಮಿಗೆ ಭಾವನೆಗಳ ಮಳೆ ತರುಸ್ದವ ಇವನು, ನಂಗೆ ಹೊಸದಾಗಿ ನಗೋಕ್ ಹೇಳ್ಕೊಟ್ಟಿದ್ದ, ಅವನ ಪ್ರತಿ ಮೆಸೇಜ್ ಕೂಡ ನಂಗೆ ಖುಷಿಕೊಡ್ತಿತ್ತು ಆದರೆ ಇದು ಪ್ರೀತಿ ಅಂತ ಅಲ್ಲ,
ಅದೇನೋ ಸಲಿಗೆ ತುಂಬಾ ಬೆಳಿತಾ ಹೋಯ್ತು ಅವನು ತನ್ನ ಹಳೇ ಪ್ರೀತಿ ಬಗ್ಗೆ ಹೇಳ್ಕೊಂಡಾಗ ಹೃದಯನ ಯಾರೋ ಗಟ್ಟಿಯಾಗ್ ಹಿಡಿದಂಗ್ ಆಯ್ತು, ಅರೇ!! ಅವನ್ ಪ್ರೀತಿಗು ನಂಗು ಏನು ಸಂಬಂಧ ಇಲ್ಲ ಆದರೂ ಎಲ್ಲೋ ಒಂದ್ ಕಡೆ ನೋವಾಗುತ್ತಿತ್ತು, ನಿನ್ನಂತ ಹುಡ್ಗಿ ನಂಗ್ ಮೊದಲೇ ಸಿಗ್ಬೇಕಿತ್ತು ಅಂತ ಅವನೇಳ್ದಾಗ ಮನಸ್ಸು ಹಕ್ಕಿ ತರ ಹಾರಿತ್ತು, ಲೋ ಈಡಿಯಟ್ ಇವಾಗ ಸಿಕ್ಕಿದಿನಲೋ ಅಂತ ಕೂಗಿ ಹೇಳೋ ಆಸೆ ನಂದಾಗಿತ್ತು ಆದರೆ ಅವನ ಮನಸ್ಸಲ್ಲಿ ನನ್ನ ಬಗ್ಗೆ ಏನ್ ಅಭಿಪ್ರಾಯ ಇದೆಯೋ ಅಂತ ಸುಮ್ಮನಾಗಿದ್ದೆ, ಸ್ನೇಹ ಹೋಗಿ ಪ್ರೇಮದ ಮಜಲು ತುಳಿದಿತ್ತು ಅಮ್ಮ ಹಾಕಿದ್ದ ಬೇಲಿಯ ತಂತಿ ಮುರಿದಿತ್ತು, ಅವನು ಕೂಡ ತನ್ ಪ್ರೀತಿನ ನನ್ ಬಳಿ ಹೇಳಿದ್ದ ನಾನು ಒಪ್ಕೊಂಡಿದ್ದೆ,
ನಾವಿಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆವು ಇಬ್ಬರ ಮಧ್ಯೆ ಎಲ್ಲ ವಿಷಯಗಳ ವಿನಿಮಯ ಆಗಿತ್ತು, ಪ್ರೇಮಲೋಕದಲ್ಲಿ ನಾವಿಬ್ಬರೂ ಚಿಟ್ಟೆಗಳಾಗಿದ್ದೆವು, ನಮ್ಮಲ್ಲಿದ್ದ ಬಾಂದವ್ಯತೆ ಎಷ್ಟಿತ್ತೆಂದರೆ ಅವನು ನನ್ನ ದೇಹ ಕೇಳಿದರು ತಕರಾರಿಲ್ಲದೆ ಅವನಿಗೆ ಒಪ್ಪಿಸುವಷ್ಟು, ಇಬ್ಬರಲ್ಲೂ ಮದುವೆ ಆಗಿ ಸಂಸಾರ ಸಾಗಿಸುವ ಆಸೆ ಹೆಚ್ಚಿತ್ತು ಒಬ್ಬರನ್ನೊಬ್ಬರು ಬಿಟ್ಟಿರುವುದು ಸಾಧ್ಯವೇ ಇಲ್ಲ ಎನ್ನುವ ಮಟ್ಟ ತಲುಪ್ಪಿದ್ದೆವು, ಮನೆಯಲ್ಲಿ ನಮ್ಮ ಪ್ರೀತಿಯ ಬಗ್ಗೆ ಕೇಳಿದ್ದೆವು ಅವರದು ಒಪ್ಪಿಗೆ ದೊರೆತಿತ್ತು, ಎಂದಿನಂತೆ ಹೆಣ್ಣು ನೋಡಲು ತಾಂಬೂಲ ತಟ್ಟೆಯೊಡನೆ ಕುಟುಂಬ ಸಮೇತರಾಗಿ ನಮ್ಮ ಮನಗೆ ಬಂದಿದ್ದರು, ಅಲ್ಲಿಯವರೆಗೂ ಚೆನ್ನಾಗೆ ಇದ್ದ ನನ್ನ ಬದುಕಿಗೆ ಸಿಡಿಲು ಬಡಿದಂತಾಯಿತು, ಅಮ್ಮನ ಕಣ್ಣೀರು ನನ್ನ ದಿಗ್ಭ್ರಮೆ ಗೊಳಿಸಿತು, ನಾನು ಮಾವ ಎಂದು ಕರೆಯಬೇಕಿದ್ದವನೇ ನನ್ನ ಜನ್ಮದಾತ ಎಂದು ತಿಳಿದು ಆಕಾಶವೇ ಕುಸಿದಂತಾಯಿತು, ನಾ ಕಟ್ಟಿದ ಪ್ರೇಮ ಗೋಪುರದ ಅಡಿಪಾಯವೇ ಕುಸಿದೋಯಿತು, ನಿಂತಲ್ಲೇ ಕುಸಿಯುವಂತಾದೆ.
ಓಡಿ ಹೋದವಳೇ ರೂಂನ ಕತ್ತಲೆ ಮೂಲೆಯಲ್ಲಿ ಕುಳಿತೆ ಇಲ್ಲಾಗುತ್ತಿರುವುದು ಕನಸೋ ಭ್ರಮೆಯೋ ಎಂದು ಕೈ ಚಿವುಟಿಕೊಂಡೆ, ನಾ ಪ್ರೀತಿಸಿ ಮನಸ್ಸೊಪ್ಪಿಸಿದ ಹುಡುಗ ನನ್ನ ಅಣ್ಣ ಎಂಬ ವಾಸ್ತವವನ್ನು ಒಪ್ಪಿಕೊಳ್ಳಲಾಗದೆ ತಡವರಿಸಿದೆ, ಆಣ್ಣ ಅಪ್ಪ ಸಿಕ್ಕರೆಂದು ಖುಷಿಪಡುವ ಮುನ್ನವೇ ನನ್ನೆಲ್ಲಾ ಸಂತೋಷದ ಬಾಗಿಲುಗಳನ್ನು ಮುಚ್ಚಿದ್ದೆ, ಇಲ್ಲಿ ತಪ್ಪು ಯಾರದು ಅಮ್ಮನ ಬೇಲಿ ತುಂಡರಿಸಿದ ನನ್ನದು ತಪ್ಪ? ಭಾವನೆಗಳಿಲ್ಲದೆ ಬದುಕುತ್ತಿದ್ದ ನನ್ನೊಳಗೆ ಪ್ರೀತಿ ಅಲೆ ಮೂಡಿಸಿದ ಅವನ ತಪ್ಪ? ಅಥವಾ ನಮ್ಮ ತಾಯಿ ತಂದೆಯವರದ? ದೇಹ ಒಪ್ಪಿಸಿಲ್ಲ ಅಷ್ಟೆ ಆದರೆ ಅದಕ್ಕಿಂತ ಪವಿತ್ರವಾದ ಮನಸ್ಸುಗಳ ಮಿಲನಕ್ಕೆ ಏನು ಅರ್ಥ? ಇಲ್ಲಿ ಯಾವ ಸಂಬಂಧದ ಸುಳಿ ದೊಡ್ಡದು, ನನ್ನಲ್ಲಿರೋ ಸಾವಿರ ಪ್ರಶ್ನೆಗಳಿಗೆ ಉತ್ತರದ ಅವಶ್ಯಕತೆ ಇಲ್ಲ ನಾನು ಯಾವುದೇ ಸಂಬಂಧ ಒಪ್ಪಿದರು ಮನಸ್ಸಿಗೆ ನೆಮ್ಮದಿ ಸಿಗುವುದಿಲ್ಲ, ತ್ರಿಶಂಕುವಂತೆ ಮಧ್ಯೆ ಉಳಿದುಬಿಟ್ಟಿದ್ದೇನೆ ಸಾಯುವಷ್ಟು ಹೇಡಿಯಲ್ಲ ಈ ಸಂಬಂಧದ ಜೊತೆಗೆ ಬದುಕಲು ಮನಸ್ಸಿಲ್ಲ......
-ಮಿಥುನ್ ಪ್ರೀತಮ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ